ರೇಯಾನ್
ಸಸ್ಯಮೂಲದ ಸೆಲ್ಯುಲೋಸನ್ನು ಪುನಾರಚಿಸಿ ಅಥವಾ ಪುನರುತ್ಪಾದಿಸಿ ಶುದ್ಧೀಕರಿಸಿ ರೂಪಿಸಿದ ಕೃತಕ ತಂತುಗಳು. ಪುನಾರಚಿತ ಸೆಲ್ಯುಲೋಸಿನಲ್ಲಿ ಆದೇಶ್ಯಗಳು ಹೈಡ್ರಾಕ್ಸಿಲ್ ಗುಂಪಿನ 15%ಗಿಂತ ಹೆಚ್ಚು ಹೈಡ್ರೊಜನನ್ನು ಪ್ರತಿಸ್ಥಾಪಿಸಿರಕೂಡದು. ರೇಷ್ಮೆ ತಂತುವಿಗೆ ಬದಲಾಗಿ ಉಪಯೋಗಿಸಲೆಂದು 19ನೆಯ ಶತಮಾನದ ಉತ್ತರಾರ್ಧದಲ್ಲಿ ಆವಿಷ್ಕಾರ. ಮೊತ್ತಮೊದಲನೆಯ ಮಾನವನಿರ್ಮಿತ ಅರೆಸಂಶ್ಲೇಷಿತ ತಂತು. ಕೃತಕ ರೇಷ್ಮೆ ಎಂಬ ಹೆಸರಿದ್ದ ಈ ತಂತುವಿಗೆ ರೇಯಾನ್ ಎಂದು ನಾಮಕರಣ ಮಾಡಿದ್ದು ಅಮೆರಿಕದ ವಾಣಿಜ್ಯ ಇಲಾಖೆ (1924). 
ಹಿಪ್ಪುನೇರಿಳೆ ತೊಗಟೆಯ ತಿರುಳು ಮತ್ತು ಗೋಂದಿನಂಥ ರಬ್ಬರ್ ಮಿಶ್ರಣಕ್ಕೆ ಸೂಜಿಯನ್ನು ಅದ್ದಿ ಕಚ್ಚಾ ಕೃತಕರೇಷ್ಮೆಯ ಎಳೆಯನ್ನು ಮೊತ್ತಮೊದಲಿಗೆ (ಸು. 1855) ತಯಾರಿಸಿದವ ಸ್ವಿಸ್ ರಸಾಯನವಿಜ್ಞಾನಿ ಜಾರ್ಜಸ್ ಆಡೆಮಾರ್ಸ್. ಕಾರ್ಡೊನೆಟ್ ರೇಷ್ಮೆ ಎಂದೇ ಕರೆಯಲಾಗು ತ್ತಿದ್ದ ಸೆಲ್ಯುಲೋಸ್-ಆಧಾರಿತ ಕೃತಕ ರೇಷ್ಮೆಗೆ ಫ್ರೆಂಚ್ ರಸಾಯನ ವಿಜ್ಞಾನಿ ಹಿಲಾಯ್‍ರೆಡೆ ಕಾರ್ಡೊನೆಟ್ ಏಕಸ್ವಾಮ್ಯ ಪಡೆದ (1884). ಇದು ಸುಂದರವಾಗಿದ್ದರೂ ಸುಲಭಜ್ವಲನಶೀಲ ಎಂಬ ಕಾರಣಕ್ಕಾಗಿ ಮಾರುಕಟ್ಟೆಯಿಂದ ನಿರ್ಗಮಿಸಿತು. ಚಾಲ್ರ್ಸ್ ಕ್ರಾಸ್, ಎಡ್ವರ್ಡ್ ಬೀವನ್, ಮತ್ತು ಕ್ಲೇಟನ್ ಬೀಡಲ್ ಎಂಬ ಬ್ರಿಟಿಷ್ ಉಪಜ್ಞಕರು ಕೃತಕರೇಷ್ಮೆ ತಯಾರಿಸುವ ಸುಲಭ, ಸುರಕ್ಷಿತ ವಿಧಾನವನ್ನು ಉಪಜ್ಞಿಸಿ (1892) ಅದಕ್ಕೆ ಏಕಸ್ವಾಮ್ಯ ಪಡೆದರು (1894). ಇದೇ ಇಂದಿನ ವಿಸ್ಕೋಸ್ ರೇಯಾನ್. 

ಮರದ ತಿರುಳು ಅಥವಾ ಗಾಯ ಕಟ್ಟಲು ಬಳಸುವ ಮೆದುಬಟ್ಟೆ ಯಿಂದ (ಲಿಂಟ್)  ಆಹರಿಸಿದ ಸೆಲ್ಯುಲೋಸನ್ನು ತೊಳೆದು, ಚೆಲುವೆಗೊ ಳಿಸಿ ಫಲಕಗಳ ತಯಾರಿ; ವಿಲೇಯ ಸಂಯುಕ್ತವಾಗಿ ಶುದ್ಧೀಕರಿಸಿದ ಸೆಲ್ಯುಲೋಸಿನ ರಾಸಾಯನಿಕ ಪರಿವರ್ತನೆ; ಸಂಯುಕ್ತದ ದ್ರಾವಣವನ್ನು ತಂತುಕಗಳ ಮೂಲಕ ಹಾಯಿಸಿ ಮೃದು ತಂತುಗಳ ತಯಾರಿ; ಪುನಃ ಹೆಚ್ಚುಕಡಿಮೆ ಶುದ್ಧ ಸೆಲ್ಯುಲೋಸ್ ಆಗಿ ತಂತುಗಳ ಪರಿವರ್ತನೆ- ಇವು ರೇಯಾನ್ ಉತ್ಪಾದನೆಯ ಸಾರ್ವತ್ರಿಕ ಹಂತಗಳು. ರೇಯಾನ್ ತಂತು ಆದ್ರ್ರ ನೂಲುವಿಕೆಯ ಉತ್ಪನ್ನ. ಅರ್ಥಾತ್, ತಂತುಕದಿಂದ ಹೊಮ್ಮುವ ತಂತುಗಳನ್ನು ಘನೀಕರಿಸಲು ಅಥವಾ ಪುನಾರಚಿಸಲು ನೇರವಾಗಿ ರಾಸಾಯನಿಕ ಮಜ್ಜಕಕ್ಕೆ ಹಾಯಿಸುತ್ತಾರೆ.

ಉತ್ಪಾದಿಸುವ ವಿಧಾನಗಳನ್ನಾಧರಿಸಿ ರೇಯಾನನ್ನು ನಾಲ್ಕು ಗುಂಪುಗಳಲ್ಲಿ ಅಳವಡಿಸಬಹುದು: ನೈಟ್ರೊಸೆಲ್ಯುಲೋಸ್ ಅಥವಾ ಕಾರ್ಡೊನೆಟ್ ರೇಯಾನ್, ವಿಸ್ಕೋಸ್ ರೇಯಾನ್, ಕ್ಯುಪ್ರಮೋನಿಯಮ್ ರೇಯಾನ್ ಮತ್ತು ಸಾಬೂನೀಕೃತ ಅಸಿಟೇಟ್ ರೇಯಾನ್. 

ಶುದ್ಧೀಕರಿಸಿದ ಸೆಲ್ಯುಲೋಸನ್ನು ನೈಟ್ರಿಕ್ ಮತ್ತು ಗಂಧಕಾಮ್ಲಗಳಿಂದ ಉಪಚರಿಸಿ ನೈಟ್ರೊಸೆಲ್ಯುಲೋಸಾಗಿ ಪರಿವರ್ತಿಸುವುದು ಕಾರ್ಡೊನೆಟ್ ಪ್ರಕ್ರಿಯೆಯ ವೈಶಿಷ್ಟ್ಯ. ಈ ವಿಧಾನ ಈಗ ಬಳಕೆಯಲ್ಲಿಲ್ಲ.

ವಾಣಿಜ್ಯೋದ್ದೇಶಗಳಿಗೆ ವಿಸ್ಕೋಸ್ ವಿಧಾನದ ವ್ಯಾಪಕ ಬಳಕೆ ಇದೆ. ಶುದ್ಧೀಕರಿಸಿದ ಸೆಲ್ಯುಲೋಸನ್ನು ಮೊದಲು ಸೋಡಿಯಮ್ ಹೈಡ್ರಾಕ್ಸೈಡಿನಿಂದ, ಬಳಿಕ ಕಾರ್ಬನ್ ಡೈಸಲ್ಫೈಡಿನಿಂದ ಉಪಚರಿಸಿದಾಗ, ಸೆಲ್ಯುಲೋಸ್ ಸ್ಯಾಂತೇಟ್ ಎಂಬ ಸಂಯುಕ್ತ ಲಭ್ಯ. ಇದನ್ನು ಸೋಡಿಯಮ್ ಹೈಡಾಕ್ಸೈಡಿನಲ್ಲಿ ಲೀನಿಸಿದಾಗ ದೊರೆಯುವ ದ್ರಾವಣವೇ ವಿಸ್ಕೋಸ್. ಈ ವಿಸ್ಕೋಸನ್ನು ತಂತುಕಗಳ ಮೂಲಕ ಆಮ್ಲೀಯ ದ್ರಾವಣದೊಳಕ್ಕೆ ಹಾಯಿಸಿದಾಗ ಗರಣೆಕಟ್ಟಿ ವಿಸ್ಕೋಸ್ ರೇಯಾನ್ ತಂತು ಲಭ್ಯ.

ತಾಮ್ರದ ಆಕ್ಸೈಡ್ ಮತ್ತು ಅಮೊನಿಯದಲ್ಲಿ ಲೀನಿಸಿದ  ಸೆಲ್ಯುಲೋಸ್ ದ್ರಾವಣವನ್ನು ಅಪೇಕ್ಷಿತ ತಂತುವ್ಯಾಸಕ್ಕಿಂತ ಕೊಂಚ ಹೆಚ್ಚಿನ ವ್ಯಾಸದ ರಂಧ್ರಗಳುಳ್ಳ ತಂತುಕದ ಮೂಲಕ ಹಾಯಿಸಿ, ಹಿಗ್ಗಿಸಿ (ಸ್ಟ್ರೆಚ್) ನೂಲುವಿಕೆ ತಂತ್ರದಿಂದ ಪಡೆಯುವ ನಾಜೂಕಾದ ಬಲಯುತ ದಾರವೇ ಕ್ಯುಪ್ರಮೋನಿಯಮ್ ರೇಯಾನ್.

ಕಾರ್ಡೊನೆಟ್, ವಿಸ್ಕೋಸ್ ಮತ್ತು ಕ್ಯುಪ್ರಮೋನಿಯಮ್ ರೇಯಾನ್‍ಗಳನ್ನು ಪುನಾರಚಿತ ಸೆಲ್ಯುಲೋಸ್‍ಗಳೆಂದು ಪರಿಗಣಿಸ ಲಾಗುತ್ತದೆ. ಅಂತಿಮ ಉತ್ಪನ್ನಗಳು ಮೂಲ ಸೆಲ್ಯುಲೋಸನ್ನು ಹೋಲುವುದೇ ಇದರ ಕಾರಣ. 

ಇಂಗ್ಲೆಂಡ್ ಮೂಲದ (ಸುಮಾರು 1918) ಸಾಬೂನೀಕೃತ ಅಸಿಟೇಟ್ ರೇಯಾನ್ ಸೆಲ್ಯುಲೋಸಿನ ಅಸಿಟೇಟ್ ನಿಷ್ಪನ್ನ. ಅಸೆಟಿಕಾಮ್ಲದಲ್ಲಿ ಸೆಲ್ಯುಲೋಸನ್ನು ಅದ್ದಿ, ತದನಂತರ ಅಸೆಟಿಕ್ ಅನ್‍ಹೈಡ್ರೈಡಿನಿಂದ ಉಪಚರಿಸಿ ಇದರ ತಯಾರಿ. 

ತೇವವನ್ನು ಹತ್ತಿಗಿಂತ ಉತ್ತಮವಾಗಿ ರೇಯಾನ್ ಅಪಶೋಷಿಸುತ್ತದೆ, ಮೆತ್ತಗಿದೆ. ಇದಕ್ಕೆ ರಂಗು ಹಾಕುವುದು ಸುಲಭ. ಇತರ ತಂತುಗಳೊಡನೆ ಸೇರಿಸಿ ಸುಲಭವಾಗಿ ನೇಯಬಹುದು. ಅಸಿಟೇಟ್ ರೇಯಾನ್ ಕಲೆ ಮತ್ತು ಸುಕ್ಕು ನಿರೋಧಕ.

ನಾನಾಬಗೆಯ ಉಡುಪುಗಳ, ಇತರ ಗೃಹೋಪಯೋಗೀ ವಸ್ತ್ರಗಳ (ಉದಾ: ಪರದೆ, ಕಂಬಳಿ), ಕೆಲವು ಔದ್ಯಮಿಕ ಉತ್ಪನ್ನಗಳ ಹಾಗೂ ಶುಚಿವಸ್ತ್ರಗಳ (ಸ್ಯಾನಿಟರಿ ನ್ಯಾಪ್ಕಿನ್ಸ್) ತಯಾರಿಯಲ್ಲಿ ವ್ಯಾಪಕ ಬಳಕೆ ಇದೆ. ಹೈ ವೆಯ್ಟ್ ಮಾಡ್ಯುಲಸ್ ರೇಯಾನ್, ಪಾಲಿನಾಸಿಕ್ ರೇಯಾನ್ ಮುಂತಾದ ವಿಶೇಷ ರೇಯಾನುಗಳೂ ಜ್ವಾಲೆ ಅಪಕರ್ಷಕ ಮತ್ತು ಅಧಿಅಪಶೋಷಕ ರೇಯಾನ್ ತಂತುಗಳಂಥ ವಿಶೇಷೋಪಯೋಗೀ ರೇಯಾನುಗಳೂ ಇವೆ.	 			(ನೋಡಿ- ಕೃತಕ-ಎಳೆಗಳು)

					 (ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ